
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಲ್ಪನೆ ಎಂಬುದು ಸತ್ಯಕ್ಕಿಂತ ಹೆಚ್ಚು ಸತ್ಯ, ಕನಸು ಎಂಬುದು ವಾಸ್ತವಕ್ಕಿಂತ ಹೆಚ್ಚು ವಾಸ್ತವ ಎಂಬುದು ಅತಿ ಸಣ್ಣಕತೆಗಳು ನಮಗೆ ಮನದಟ್ಟು ಮಾಡಿಕೊಡುವಂತೆ ಕಾಣುತ್ತವೆ. ಹೆಚ್ಚಿನ ಅತಿ ಸಣ್ಣಕತೆಗಳು ವಾಸ್ತವವಾದೀ ಮಾರ್ಗವನ್ನು ಬಿಟ್ಟುಕೊಟ್ಟಿರುವುದಕ್ಕೆ ಪ್ರಾಯಶಃ ಇದೇ ಕಾರಣ. ವಿವರಣೆ ವರ್ಣನೆಗಳ ಹಂಗು ಇಲ್ಲದಿರುವುದರಿಂದ ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳು ಇವುಗಳ ಸಹಜ ಲಕ್ಷಣಗಳಾಗಿವೆ. ಅಂತರಂಗದ ಆಳವನ್ನು, ಅಮೂರ್ತವನ್ನು ಸಾಂಕೇತಿಕವಾದುದದ್ದನ್ನು ಮತ್ತೊಂದೇ ಸ್ತರದಲ್ಲಿ ಗ್ರಹಿಸಿ ಅಭಿವ್ಯಕ್ತಿಸಲು ಲೇಖಕರಿಗೆ ಈ ಪ್ರಕಾರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜಗತ್ತಿನ ಎಲ್ಲ ಭಾಷೆಗಳ ದೊಡ್ಡ ಲೇಖಕರು, ದೀರ್ಘವಾದ ಕತೆ-ಕಾದಂಬರಿಗಳನ್ನು ಬರೆದವರನ್ನೂ ಸೇರಿಸಿಕೊಂಡು, ಈ ಪ್ರಕಾರದಲ್ಲಿ ಕೃಷಿಮಾಡಿದ್ದಾರೆ. ತುಂಬ ಸೂಕ್ಷ್ಮ ವಾದ, ನಾಜೂಕಾದ ಸಂಗತಿಗಳನ್ನು ಸೂಚ್ಯವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಇನ್ನೂ ಕೆಲವು ವೇಳೆ ಮುಚ್ಚಿಟ್ಟು ಹೇಳಲು ಈ ಪ್ರಕಾರವು ತನ್ನ ಸ್ವರೂಪದ ಕಾರಣದಿಂದಲೇ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪೂರ್ವದ ದಂತಕತ, ನೀತಿಕತೆ, ದೃಷ್ಟಾಂತ ಕತೆಗಳ ಆಧುನಿಕ ರೂಪವಾಗಿ ಕಂಡರೂ ಆಶ್ಚರ್ಯವಿಲ್ಲ:
|
ಟಿ.ಪಿ. ಅಶೋಕ ಹುಟ್ಟಿದ್ದು ೧೯೫೫ರಲ್ಲಿ, ನಂಜನಗೂಡಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎರಡು ವರ್ಷ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸದ್ಯ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು. ಆರನೆಯ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಲಭಿಸಿದೆ. ನಾಡಿನಾದ್ಯಂತ ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಸಹೃದಯತೆ ಕುರಿತು ಸುಮಾರು ಮುನ್ನೂರು ಕಿರು ಅವದಿಯ ಶಿಬಿರಗಳನ್ನು ನಡೆಸಿರುವ ಸಾಧನೆ ಅವರದು. ಸದ್ಯ ’ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ಭಾನುವಾರ ’ಆಂತರ್ಯ’ ಎಂಬ ಅಂಕಣವನ್ನೂ, ’ಕಸ್ತೂರಿ’ ಮಾಸಿಕದಲ್ಲಿ ಪ್ರತಿ ತಿಂಗಳು ’ಪುಸ್ತಕ ಸನ್ನಿಧಿ’ ಎಂಬ ಅಂಕಣವನ್ನೂ ಬರೆಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹ, ಹೀಗೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿರುವ ಅವರು ಇದುವರೆಗೆ ಇಪ್ಪತ್ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಸಾಹಿತ್ಯ ಸಂಪರ್ಕ, ಸಾಹಿತ್ಯ ಸಂದರ್ಭ, ಶಿವರಾಮ ಕಾರಂತ: ಎರಡು ಅಧ್ಯಯನಗಳು, ವಾಸ್ತವತಾವಾದ, ಪುಸ್ತಕ ಪ್ರೀತಿ, ಪುಸ್ತಕ ಸಮಯ, ಸಾಹಿತ್ಯ ಸಂಬಂಧ, ತೇಜಸ್ವಿ ಕಥನ, ಯು.ಆರ್. ಅನಂತಮೂರ್ತಿ: ಒಂದು ಅಧ್ಯಯನ ಮುಖ್ಯ ಕೃತಿಗಳು. ಅವರು ಸಂಪಾದಿಸಿರುವ ಕೃತಿಗಳಲ್ಲಿ ಎ.ಕೆ. ರಾಮಾನುಜನ್ ನೆನಪಿನ ಸಂಪುಟ, ಶಿವರಾಮ ಕಾರಂತ: ಈ ಶತಮಾನದ ನೋಟ, ಕಂಬಾರರ ಕಾವ್ಯ: ಕೆಲವು ಅಧ್ಯಯನಗಳು, ಆರ್ಕೆಸ್ಟ್ರಾ ಮತ್ತು ತಂಬೂರಿ (ಗೌರೀಶ ಕಾಯ್ಕಿಣಿಯವರ ಆಯ್ದ ಲೇಖನಗಳು), ಅರೆಶತಮಾನದ ಅಲೆಬರಹಗಳು (ಕೆ.ವಿ.ಸುಬ್ಬಣ್ಣನವರ ಸಮಗ್ರ ಲೇಖನಗಳು), ವೈದೇಹಿ ವಾಚಿಕೆ ಗಮನಾರ್ಹವಾದುವು. ಫಾದರ್ ಸೆರ್ಗಿಯಸ್, ರಿಕ್ತರಂಗಭೂಮಿ, ಓವರ್ಕೋಟ್ ಅನುವಾದಿತ ಕೃತಿಗಳು. ಸಾಹಿತ್ಯ ಸಂಚಾರ ಇತ್ತೀಚಿನ ಕೃತಿ. ಅಶೋಕ ಅವರು ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಮ್.ಇನಾಂದಾರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ತೀನಂಶ್ರೀ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಂದೇಶ್ ವಿಶೇಷ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿ ಮುಖ್ಯವಾದುವು.
|
|
| |
|
|
|
|