
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
125 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788194137962 |
ಕೋಡ್ |
: |
1119394 |
ಓದುಗರೊಡನೆ
ಇದು ನನ್ನ ಒಂಬತ್ತನೆಯ ಕಾದಂಬರಿ. ಈಚಿನ ಎರಡು ಕಾದಂಬರಿಗಳಾದ "ವಿಕಲ್ಪ" ಮತ್ತು "ಸಾವಿನ ದಶಾವತಾರ" ಕೃತಿಗಳಿಗೆ ಓದುಗರು ನೀಡಿದ ಪ್ರೋತ್ಸಾಹಕ್ಕಾಗಿ ಕೃತಜ್ಞನಾಗಿದ್ದೇನೆ. "ವಿಕಲ್ಪ" ಕಾದಂಬರಿಯನ್ನು ವರ್ಷದ ಮುಖ್ಯ ಕೃತಿಯೆಂದು ಆಯ್ದು ಟಿಪ್ಪಣಿ ಬರೆದ ಡಾ. ಚಿಂತಾಮಣಿ ಕೊಡ್ಲೆಕೆರೆ, ಕಾದಂಬರಿಯನ್ನು ತಮ್ಮ ಅಧ್ಯಯನ ಕೂಟದ ಚರ್ಚೆಗಾಗಿ ಆಯ್ಕೆ ಮಾಡಿಕೊಂಡ ಈ ಹೊತ್ತಗೆ ತಂಡಕ್ಕೂ ಕೂಡ ವಂದನೆಗಳು.
"ಸಾವಿನ ದಶಾವತಾರ" ಕಾದಂಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ಬರಲು ಕಾರಣರಾದ ಕಾದಂಬರಿಕಾರ್ತಿ ತಾರಾಭಟ್ ಮತ್ತು ಕತೆಗಾರ-ವಿಮರ್ಶಕ ಬೆಳಗೋಡು ರಮೇಶ್ಭಟ್, ಪ್ರಶಸ್ತಿ ಸಮಿತಿಯ ನಿರ್ವಾಹಕರಾದ ಶಾರದಾ ಭಟ್ ಹಾಗೂ ಧರ್ಮದರ್ಶಿಗಳಾದ ಡಾ. ಭಾಸ್ಕರ್ ಆಚಾರ್ಯ ಅವರಿಗೂ ವಂದನೆಗಳು. "ಸಾವಿನ ದಶಾವತಾರ" ಕೃತಿಗೆ ಬಂದ ಸಾರ್ವಜನಿಕ ಮೆಚ್ಚುಗೆ ಉಲ್ಲೇಖಗಳಲ್ಲಿ ಬಿ. ಆರ್. ಲಕ್ಷ್ಮಣರಾವ್, ಡಾ. ಲೋಕೇಶ್ ಅಗಸನಕಟ್ಟೆ, ಡಾ. ಶುಭಶ್ರೀ ಪ್ರಸಾದ್, ಪ್ರೊ. ಕೆ. ಸುಂದರರಾಜ್, ಪ್ರೊ. ಕೆ. ಎಸ್. ನಾಗೇಗೌಡ, ಬಿ. ವಿ. ಕೆಡಿಲಾಯ, ಪ್ರೊ. ಮುರಳೀಧರ ಉಪಾಧ್ಯ ಇವರ ಬರವಣಿಗೆ/ಉಲ್ಲೇಖಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದವು.
ಪ್ರಸ್ತುತ ಕಾದಂಬರಿಯ ಮುಖ್ಯ ಹಾಗೂ ಸೂಕ್ಷ್ಮ ಭಾಗವನ್ನು ಸುಮಾರು 2015ರಲ್ಲೇ ಕೊಡಗಿನ ಒಂದು ರೆಸಾರ್ಟಿನಲ್ಲಿ ಒಂದು ಇಡೀ ದಿನ ಮತ್ತು ರಾತ್ರಿ ಕುಳಿತು ಬರೆದಿದ್ದೆ. ನಿಜವಾಗಿ ಆ ಭಾಗ ಒಂದು ಕಾಲದಲ್ಲಿ ನನಗೆ ಹತ್ತಿರದವರಾಗಿದ್ದು ಈಗ ದಿವಂಗತರಾಗಿರುವವರೊಬ್ಬರು ಮಾಡಿಕೊಂಡಿದ್ದ ಆತ್ಮನಿವೇದನೆ. ಬರವಣಿಗೆ ಎಷ್ಟೊಂದು ಪುಟಗಳಾಯಿತೆಂದರೆ-ಎಷ್ಟು ಚೆನ್ನಾಗಿ ಬಂತೆಂದರೆ-ನನಗೇ ನನ್ನ ಬಗ್ಗೆ ನಾಚಿಕೆಯಾಯಿತು, ಹೆದರಿಕೆಯೂ ಆಯಿತು. ಇನ್ನೊಬ್ಬರ ಖಾಸಗಿ ಜೀವನವನ್ನು ನಿರೂಪಣೆಯ ಸೊಗಸಿಗೆ ಬಳಸಿಕೊಳ್ಳುವುದರ ಬಗ್ಗೆ ಖೇದವಾಯಿತು. ನಮಗೆ ಆಪ್ತರಾಗಿದ್ದವರ ಬಗ್ಗೆ ಬರೆದರೆ ತಪ್ಪೇನಿಲ್ಲ. ಆದರೆ ನಾವು ಬರೆಯಬೇಕಾದ್ದು ಅವರ ಬದುಕಿನ ವಿವರಗಳನ್ನಲ್ಲ; ಆ ವಿವರಗಳ ಹಿಂದಿರುವ ತಾತ್ವಿಕ ಪ್ರೇರಣೆಗಳನ್ನು ಕುರಿತು ಎಂಬ ಭಾವನೆಯೊಡನೆ, ಆ ಬರವಣಿಗೆಯನ್ನು ನಾನೇ ಬದಿಗೆ ಸರಿಸಿ, ನಂತರ ನಾಶ ಮಾಡಿದೆ. ಬರವಣಿಗೆಯ ಪುಟಗಳು ನಮ್ಮ ಮನೆಯಲ್ಲಿರುವಷ್ಟು ದಿನವೂ ವಿಚಿತ್ರ ರೀತಿಯ ಹಿಂಸೆಯಾಗುತ್ತಿತ್ತು. ಆದರೆ ಆ ನಿವೇದನೆ ನನ್ನನ್ನು ಕಾಡುತ್ತಲೇ ಇತ್ತು. ಅದರ ಜೊತೆಗೆ, ಇನ್ನೂ ಕೆಲವು ಕಥನ-ನಿವೇದನೆಗಳು ಸೇರಿಕೊಂಡು ಬರವಣಿಗೆ ಈಗ ಈ ರೂಪಕ್ಕೆ ಬಂದಿದೆ. ಹಿಂದಿನ ಕಾದಂಬರಿಗಳ ಕೆಲವು ನೋಟಗಳು ಕೂಡ ಈ ಬರವಣಿಗೆಯಲ್ಲಿ ಇನ್ನಷ್ಟು ಸ್ಪಷ್ಟವಾಗಿ ಹರಳುಗಟ್ಟಿವೆ, ಹದಗೊಂಡಿವೆ ಎಂದು ಕೂಡ ಭಾವಿಸಿದ್ದೇನೆ. ಒಂದು ಪ್ರವಾಸದ ಸಂದರ್ಭದಲ್ಲಿ ಶ್ರೀಮತಿ ರಜನಿ ನರಹಳ್ಳಿಯವರು ತಮ್ಮ ಎಂದಿನ ಲಹರಿಯಲ್ಲಿ ಕೇಳಿದ ಒಂದು ಸೂಕ್ಷ್ಮ ಪ್ರಶ್ನೆ ಕೂಡ ನನ್ನನ್ನು ತುಂಬಾ ದಿನ ಕಾಡಿದೆ.
ಬರವಣಿಗೆಯಲ್ಲಿ ಲೋಕದ ಬಗ್ಗೆ ಬರೆಯಬಹುದು, ಬರೆಯಬೇಕು. ಅನ್ಯರ ಬಗ್ಗೆ ಬರೆಯಬಹುದು, ಬರೆಯಬೇಕು. ಆದರೆ ಇದೆಲ್ಲವನ್ನೂ ನಮ್ಮ ಅಂತರಂಗದ ಸಮಸ್ಯೆಯಾಗಿ, ನಮ್ಮ ದಿನನಿತ್ಯದ ಬದುಕಿನ ಸಮಸ್ಯೆಯಾಗಿ, ತುಮುಲವಾಗಿ ಬರವಣಿಗೆಯಲ್ಲಿ ಎದುರಿಸುವುದು ಹೇಗೆ? ಒಳಗುಮಾಡಿಕೊಳ್ಳುವುದು ಹೇಗೆ? ಸಾಮಾಜಿಕ ವ್ಯಕ್ತಿಗಳಾಗಿ, ಕುಟುಂಬಸ್ಥರಾಗಿ ನಾವು ಈ ಕೃತಿಯಲ್ಲಿ ಪರಿಶೀಲನೆಗೆ ಒಳಗಾಗಿರುವ ಬದುಕಿನ ಸ್ತರವನ್ನು ಲೋಕವು ಮೆಚ್ಚುವಂತೆ, ನಮ್ಮ ಸಾಮಾಜಿಕ ಸ್ಥಾನಮಾನ ಪ್ರಸಿದ್ಧಿಗೆ ಧಕ್ಕೆ ಬಾರದಂತೆ ಯಶಸ್ವಿಯಾಗಿ ಎದುರಿಸಿಬಿಡುವಷ್ಟು ಮರೆಮಾಚಿಬಿಡುವಷ್ಟು (ಸ್ವತಃ ನಮ್ಮಿಂದಲೂ) ಜಾಣರಾಗಿರುತ್ತೇವೆ. ಒಂದು ಹಂತದಲ್ಲಿ ಅದು ಅವಶ್ಯಕವೋ ಏನೋ? ಆದರೆ ಇದನ್ನೆಲ್ಲ ಬರವಣಿಗೆಯಲ್ಲಿ ಎದುರಿಸುವುದು ಎಂದರೇನು? ಎದುರಿಸುವುದು ಹೇಗೆ? ನನ್ನನ್ನು ತುಂಬಾ ದಿನ ಕಾಡಿರುವ ಈ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಈ ಕಾದಂಬರಿ ಓದುಗರ ಮುಂದಿದೆ. ಎಂದಿನಂತೆ ಅವರ ಓದು, ಪ್ರೀತಿ, ಗಮನವನ್ನು ಕೋರುತ್ತಾ .....
22.3.2019 -ಕೆ. ಸತ್ಯನಾರಾಯಣ
ವರ್ಜೀನಿಯಾ, ಅಮೆರಿಕ
|
| |
|
|
|
|